ಇಪ್ಪಾರು ಚಾವಣಿ-
ಮಧ್ಯಭಾಗ ಎತ್ತರವಾಗಿದ್ದು ಎರಡು ಕಡೆ ಗೋಡೆಗಳ ಮೇಲೆ ಇಳಿಜಾರಾಗಿ ಹಾಕಿರುವ ಚಾವಣಿ (ಗೇಬಲ್ ರೂಫ್). ಕಟ್ಟಡದ ಮೇಲೆ ಒಂದು ಕೊನೆಯಿಂದ ನೋಡಿದರೆ ತ್ರಿಕೋಣಾಕೃತಿ ಅಕಾರದಲ್ಲಿ ಇರುತ್ತದೆ. ಇಂಥ ಚಾವಣಿಯಲ್ಲಿ ನೀರು ನಿಲ್ಲುವುದಿಲ್ಲ ಮತ್ತು ಇಳಿಜಾರು ಇರುವುದರಿಂದ ನೀರು ಗೋಡೆಗಳಿಗೆ ಇಳಿಯದೆ ದೂರಕ್ಕೆ ಬೀಳುತ್ತದೆ. ಈ ಚಾವಣಿಗೆ ಸಾಮಾನ್ಯವಾಗಿ ಹೆಂಚು, ಕಲ್ನಾರಿನ ತಗಡು ಹಾಗೂ ಜಿûಂಕ್‍ಷೀಟುಗಳನ್ನು ಉಪಯೋಗಿಸುವರು. ಸಿಮೆಂಟ್ ಕಾಂಕ್ರೀಟ್ ಬಳಕೆಗೆ ಬರುವುದಕ್ಕೆ ಮೊದಲು, ಕೇವಲ ಹೆಂಚುಗಳನ್ನೇ ಉಪಯೋಗಿಸುತ್ತಿದ್ದ ಕಾಲದಲ್ಲಿ ಎಲ್ಲ ದೇಶಗಳ ಎಲ್ಲ ಮನೆಗಳಿಗೂ ಸಾಮಾನ್ಯವಾಗಿ ಇಪ್ಪಾರು ಚಾವಣಿ ಇರುತ್ತಿತ್ತು. ಮಳೆ ಅತಿಯಾಗಿರುವ ಮಲೆನಾಡು ಭಾಗಗಳಲ್ಲಿ ಈ ಚಾವಣಿ ತುಂಬ ಇಳಿಜಾರಾಗಿ ಇರಬೇಕಾಗುತ್ತಿತ್ತು. ಹಾಗಿಲ್ಲದಲ್ಲಿ ಇರಿಚಲಿನಿಂದ ಗೋಡೆಗಳು ನೆನೆದು ಕೆಡುತ್ತಿದ್ದವು. ಅಲ್ಲಿನ ವಾತಾವರಣಕ್ಕೆ ಎರಡು ಚಾವಣಿಗಳು ಸಾಲದೆ ಬಂದಾಗ ಅಕ್ಕಪಕ್ಕದ ಗೋಡೆಗಳನ್ನೂ ಮುಚ್ಚಿ ನಾಲ್ಕು ಚಾವಣಿಗಳನ್ನು ಹಾಕತೊಡಗಿದರು. ಕೊಡಗು, ನೀಲಗಿರಿ ಮೊದಲಾದ ಮಲೆನಾಡು ಸ್ಥಳಗಳಲ್ಲಿ ಇಂಥ ಮನೆಗಳೇ ಹೆಚ್ಚು. ಬರಬರುತ್ತ ಈ ಚಾವಣಿಗಳಿಗೆ ಅಲಂಕಾರಕ್ಕಾಗಿ ಉಪಚಾವಣಿಗಳನ್ನು ಹಾಕುವ ಹವ್ಯಾಸ ಬೆಳೆಯಿತು. ಚೀನದಲ್ಲಿ ಇಂಥವನ್ನು ಮೆಟ್ಟಲು ಮೆಟ್ಟಲಾಗಿ ಕಟ್ಟುತ್ತಾರೆ: ಕಿಟಕಿಗಳ ಮೇಲೆ ಬಿಸಿಲು ಮರೆಗಾಗಿ ಹಾಕುವ ಚಜ್ಜಾಗಳನ್ನು, ಮನೆಯ ವರಾಂಡದ ತುದಿಯನ್ನು ಇಪ್ಪಾರು ಚಾವಣಿಗಳಿಂದ ಕಟ್ಟಿರುವುದಕ್ಕೆ ಅನೇಕ ಉದಾಹರಣೆಗಳಿವೆ. ಜೈನ ಬೌದ್ಧ ಮಾದರಿಯ ದೇವಾಲಯಗಳಲ್ಲಿನ ಸುಕನಾಸಿಗಳಲ್ಲಿ ಈ ಬಗೆಯ ಚಾವಣಿಗಳನ್ನು ಕಾಣಬಹುದು ಈಗ ಅಲಂಕಾರಕ್ಕಾಗಿ ಸಿಮೆಂಟ್ ಕಾಂಕ್ರೀಟ್‍ನಲ್ಲೂ ಇಪ್ಪಾರು ಚಾವಣಿ ಹಾಕುತ್ತಾರೆ.

(ಎಚ್.ಎಸ್.ಆರ್.)
(ಪರಿಷ್ಕರಣೆ: ಎಂ. ಜಿ. ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ